ಬುಧವಾರ, ಆಗಸ್ಟ್ 31, 2011

ದೈಹಿಕ ಶಿಕ್ಷಕ ಮಂಜುನಾಥ್‌ಗೆ ವಿಶೇಷ ಶಿಕ್ಷಕ ಪ್ರಶಸ್ತಿ




ಭದ್ರಾವತಿ ಕಾಗದನಗರ ಪ್ರೌಢಶಾಲೆಯ ದೈಹಿಕ ಶಿಕ್ಷಕ ಮಂಜುನಾಥ್ ಅವರಿಗೆ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ನೀಡಲಾಗುವ ೨೦೧೦-೧೧ನೇ ಸಾಲಿನ ವಿಶೇಷ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ದೈಹಿಕ ಶಿಕ್ಷಕರು, ಕಲಾವಿದರು ಹಾಗೂ ಕ್ರೀಡಾಪಟುಗಳಾಗಿರುವ ಮಂಜುನಾಥ್ ಅವರಿಗೆ ಪ್ರಶಸ್ತಿ ಲಭಿಸಿರುವುದು ತಾಲ್ಲೂಕು ಹಾಗೂ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಸಿಬ್ಬಂದಿ ಬಳಗ ಹಾಗೂ ವಿವಿಧ ಸಂಘ-ಸಂಸ್ಥೆಗಳು ಮಂಜುನಾಥ್ ಅವರನ್ನು ಅಭಿನಂದಿಸಿವೆ.
ಚಿನ್ನನಾಗಯ್ಯ ಮತ್ತು ಮುತ್ಯಾಲಮ್ಮನವರ ಪುತ್ರನಾಗಿ ೨೪.೧೨.೧೯೬೪ರಲ್ಲಿ ಜನಿಸಿದ ಮಂಜುನಾಥ್ ೧೯೯೦ ರಿಂದ ಕಾಗದ ನಗರ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭರತನಾಟ್ಯ ಪರೀಕ್ಷೆ, ರಾಜ್ಯಮಟ್ಟದ ಅಥ್ಲೆಟಿಕ್ಸ್ ತೀರ್ಪುಗಾರರ ಪರೀಕ್ಷೆ ಮತ್ತು ರಾಜ್ಯ ಮಟ್ಟದ ಕಬಡ್ಡಿ ಆಟದ ತೀರ್ಪುಗಾರರ ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಿದ್ದಾರೆ.
ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಜೆ.ಪಿ.ಸಮಾಜರತ್ನ ರಾಜ್ಯ ಪ್ರಶಸ್ತಿ, ನೃತ್ಯ ಶ್ರೀ ಪ್ರಶಸ್ತಿ, ಡಾ. ಅಂಬೇಡ್ಕರ್ ಸದ್ಭಾವನಾ ರಾಜ್ಯ ಪ್ರಶಸ್ತಿ, ಚಿತ್ರ ಶ್ರೀ ರಾಜ್ಯ ಪ್ರಶಸ್ತಿ, ಬಸವಜ್ಯೋತಿ ರಾಜ್ಯ ಪ್ರಶಸ್ತಿ, ಕಲಾರತ್ನ ಪ್ರಶಸ್ತಿ, ಸುವರ್ಣ ಕರ್ನಾಟಕ ಕನ್ನಡಿಗ ಕೇರಳ ರಾಜ್ಯ ಪ್ರಶಸ್ತಿ, ನೃತ್ಯ ಕಲಾ ಚೇತನ ಪ್ರಶಸ್ತಿ, ಪತಂಜಲಿ ರತ್ನ ರಾಜ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ ಮತ್ತು ಪ್ರೊ.ಬಿ.ಕೃಷ್ಣಪ್ಪ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ನೃತ್ಯಪ್ರಿಯ, ನೃತ್ಯ ಆರಾಧಕ, ಆದರ್ಶ ಶಿಕ್ಷಕ ರತ್ನ ಮತ್ತು ನಗೆ ನಾಟ್ಯ ಚೇತನ ಶ್ರೀ ಬಿರುದುಗಳು ಲಭಿಸಿವೆ.
ಎನ್.ಸಿ.ಸಿ ಮತ್ತು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಹಲವು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ೧೧ ಬಾರಿ ರಕ್ತದಾನ ಸಹ ಮಾಡಿದ್ದಾರೆ.
ಅಂತರ್ ಕಾಲೇಜು ಮಟ್ಟದ ಕಬ್ಬಡಿ ಪಂದ್ಯಾವಳಿಗಳಲ್ಲಿ ಚಿನ್ನದ ಮತ್ತು ಕಂಚಿನ ಪದಕಗಳನ್ನು ಹಾಗೂ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ರಾಜ್ಯ ಮಟ್ಟದ ರಸ್ತೆ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುವ ಮಂಜುನಾಥ್ ಭಾರತ ಸರ್ಕಾರದ ಮಿನಿಸ್ಟರಿ ಆಫ್ ಎಜುಕೇಷನ್ ಅಂಡ್ ಸೋಶಿಯಲ್ ವೆಲ್‌ಪೇರ್ ನಿಂದ ೩ ಬಾರಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಚಂದನ ಟಿ.ವಿಯಲ್ಲಿ ಪ್ರಸಾರವಾಗುವ ಬೆಳಗು, ಉದಯ ಟಿ.ವಿಯಲ್ಲಿ ಪ್ರಸಾರವಾಗುವ ನಗೆ, ಸಖ್ಖತ್ ಸವಾಲ್ ಹಾಗೂ ಝೀ ಕನ್ನಡ ಟಿ.ವಿಯಲ್ಲಿ ಪ್ರಸಾರವಾಗುವ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಹಲವು ತರಬೇತಿಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಭರತನಾಟ್ಯ ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಿರುವ ಮಂಜುನಾಥ್ ಅಪೇಕ್ಷ ನೃತ್ಯ ಕಲಾ ವೃಂದವನ್ನು ಸ್ಥಾಪಿಸುವ ಮೂಲಕ ಉಚಿತವಾಗಿ ನೃತ್ಯ ತರಬೇತಿಯನ್ನು ನೀಡುತ್ತಿದ್ದಾರೆ. ಸುಮಾರು ೬೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆತ್ತಿದ್ದಾರೆ. ಪ್ರಸ್ತುತ ಅಪೇಕ್ಷ ಮಂಜುನಾಥ್ ಎಂಬ ಹೆಸರಿನಿಂದಲೇ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಸುಮಾರು ೧೮ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಈ ಬಾರಿ ವಿಶೇಷ ಶಿಕ್ಷಕ ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ಜಿಲ್ಲೆಯ ಸೌಭಾಗ್ಯ ಎಂದರೇ ತಪ್ಪಾಗಲಾರದು.
ಮಂಜುನಾಥ್ ಅವರು ಒಬ್ಬ ಮಾದರಿ ಶಿಕ್ಷಕನಾಗಿ ಹೊರಹೊಮ್ಮಿದ್ದು, ಜಿಲ್ಲೆಯ ಇತರೆ ಶಿಕ್ಷಕರು ಸಹ ಇವರ ದಾರಿಯಲ್ಲಿ ನಡೆಯಲಿ ಎಂಬುದು ಎಲ್ಲರ ಆಶಯವಾಗಿದೆ.
-ಅನಂತಕುಮಾರ್, ಭದ್ರಾವತಿ

ಕಾಮೆಂಟ್‌ಗಳಿಲ್ಲ: