ಬುಧವಾರ, ಆಗಸ್ಟ್ 24, 2011

ಮತ್ತೆ ಮತ್ತೆ ನೆನಪಿಗೆ ಬರುತ್ತಾರೆ...




ಪಿ.ಲಂಕೇಶ್ ಮತ್ತೆ ಮತ್ತೆ ನೆನಪಿಗೆ ಬರುತ್ತಾರೆ. ಪತ್ರಿಕೋದ್ಯಮ ಎಂದರೇ ಕೇವಲ ದಿನ ಪತ್ರಿಕೆಗಳಿಗೆ ಮಾತ್ರ ಸಂಬಂಧಪಟ್ಟದ್ದು ಎಂಬ ಮಾತನ್ನು ಸುಳ್ಳಾಗಿಸಿ ಹೋದವರು. ಕಪ್ಪು ಪತ್ರಿಕೋದ್ಯಮಕ್ಕೂ ಹೊಸ ಆಯಾಮ ನೀಡಿದವರು. ಕಪ್ಪು ಪತ್ರಿಕೋದ್ಯಮವನ್ನು ಪ್ರೀತಿಸುವ ಯುವ ಪತ್ರಕರ್ತರಿಗೆ ಮಾದರಿಯಾಗಿ ಕಣ್ಮರೆಯಾದವರು. ಹಿನ್ನಲೆಯಲ್ಲಿಯೇ ಅವರು ಮತ್ತೆ ಮತ್ತೆ ನೆನಪಿಗೆ ಬರುತ್ತಾರೆ.

ಚಿಂತಕರಾಗಿ, ಸಾಹಿತಿಯಾಗಿ, ಪತ್ರಕರ್ತರಾಗಿ, ಉಪನ್ಯಾಸಕರಾಗಿ, ನಟರಾಗಿ, ನಿರ್ದೇಶಕರಾಗಿ ಹೀಗೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರು. ವ್ಯಾಸ್ತವಿಕ ಬದುಕಿನ ನೈಜತೆಯನ್ನು ಪತ್ರಿಕೆಗಳಲ್ಲಿ ಬಿಂಬಿಸುವ ಮೂಲಕ ಸಮಾಜದ ಹಲವು ದೃಷ್ಟಿ ಕೋನಗಳನ್ನು ಎಳೆ ಎಳೆಯಾಗಿ ಬಿಡಿಸಿದವರು. ಪಿ.ಲಂಕೇಶ್ ಒಬ್ಬ ವ್ಯಕ್ತಿಯಾಗದೆ ಶಕ್ತಿಯಾಗಿ ಹೊರ ಹೊಮ್ಮಿದವರು.

ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿ ಗ್ರಾಮದಲ್ಲಿ ಮಾರ್ಚಿ , ೧೯೩೫ ರಂದು ಜನಿಸಿದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.. ಪದವಿಯನ್ನು ಹಾಗು ಮೈಸೂರು ವಿಶ್ವವಿದ್ಯಾಲಯದಿಂದ ಎಮ್.. ಪದವಿಯನ್ನು ಪಡೆದರು. ಬಳಿಕ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಆಂಗ್ಲ ಭಾಷೆಯ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು.

೧೯೬೨ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ೧೯೭೫ರ ಸುಮಾರಿಗೆ ಲಂಕೇಶರು ಅಧ್ಯಾಪಕ ವೃತ್ತಿಯನ್ನು ತ್ಯಜಿಸಿ ತಮ್ಮದೆ ಆದ ಲಂಕೇಶ್ ಪತ್ರಿಕೆ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡ ವಾರಪತ್ರಿಕೆ ತುಂಬ ಜನಪ್ರಿಯವಾಯಿತು.

ಲಂಕೇಶರ ಮೊದಲ ಕಥಾಸಂಕಲನ `ಕೆರೆಯ ನೀರನು ಕೆರೆಗೆ ಚೆಲ್ಲಿ' ೧೯೬೩ರಲ್ಲಿ ಪ್ರಕಟವಾಯಿತು. ೧೯೬೪ರಲ್ಲಿ ಅವರ ನಾಟಕಗಳಾದ `ಟಿ. ಪ್ರಸನ್ನನ ಗ್ರಹಸ್ಥಾಶ್ರಮ', `ನನ್ನ ತಂಗಿಗೊಂದು ಗಂಡು ಕೊಡಿ' ಹಾಗೂ `ತೆರೆಗಳು' ಪ್ರಕಟಗೊಂಡವು ಹಾಗು ರಂಗದ ಮೇಲೂ ಅಭಿನಯಿಸಲ್ಪಟ್ಟವು. `ಕಲ್ಲು ಕರಗುವ ಸಮಯ', `ನಾನಲ್ಲ', `ಉಮಾಪತಿಯ ಸ್ಕಾಲರ್ಷಿಪ್ ಯಾತ್ರೆ', `ಉಲ್ಲಂಘನೆ' ಮತ್ತು `ಮಂಜು ಕವಿದ ಸಮಯ' ಇವು ಅವರ ಕಥಾಸಂಗ್ರಹಗಳು.

`ಬಿರುಕು', `ಮುಸ್ಸಂಜೆಯ ಕಥಾಪ್ರಸಂಗ' ಮತ್ತು `ಅಕ್ಕ' ಇವು ಅವರ ಕಾದಂಬರಿಗಳು. `ಪ್ರಸ್ತುತ' ಮತ್ತು `ಕಂಡದ್ದು ಕಂಡ ಹಾಗೆ' ಅವರ ವಿಮರ್ಶಾ ಸಂಕಲನಗಳು. `ಟೀಕೆ ಟಿಪ್ಪಣಿ' ಅಂಕಣ ಬರಹಗಳ ಸಂಗ್ರಹ. `ಕಲ್ಲು ಕರಗುವ ಸಮಯ' ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದೆ. ಲಂಕೇಶ್ ಅವರು ಸಂಸ್ಕಾರ ಚಲನಚಿತ್ರದಲ್ಲಿ ನಾರಣಪ್ಪನ ಪಾತ್ರವನ್ನು ಅಭಿನಯಿಸಿದ್ದಾರೆ. ಅಲ್ಲದೆ ಪಲ್ಲವಿ, ಅನುರೂಪ, ಖಂಡವಿದೆ ಕೊ ಮಾಂಸವಿದೆ ಕೊ, ಎಲ್ಲಿಂದಲೊ ಬಂದವರು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಪಲ್ಲವಿ ಚಲನಚಿತ್ರಕ್ಕೆ ಕೇಂದ್ರ ಸರಕಾರದಿಂದ 'ಅತ್ಯುತ್ತಮ ನಿರ್ದೇಶಕ' ಎಂದು ಪ್ರಶಸ್ತಿ ಲಭಿಸಿದೆ.

ಹುಳಿ ಮಾವಿನಮರ ಲಂಕೇಶ್ ಆತ್ಮಕಥೆ. ಇಲ್ಲಿ ಮಾವಿನಮರದ ಜೀವನ ಘಟ್ಟಗಳಂತೆ ತಮ್ಮ ಜೀವನ ಕಥನವನ್ನು ನಿರೂಪಿಸಿದ್ದಾರೆ.

ಪಿ.ಲಂಕೇಶ್ ತಮ್ಮ ಮಕ್ಕಳಾದ ಕವಿತಾ, ಗೌರಿ ಮತ್ತು ಇಂದ್ರಜಿತ್ ರವರಿಗೂ ಸಹ ತಮ್ಮ ವೃತ್ತಿ ಬದುಕನ್ನು ಧಾರೆ ಎರೆದು ಕೊಟ್ಟಿದ್ದಾರೆ ಎಂದರೆ ತಪ್ಪಾಗಲಾರದು. ತಂದೆಯ ದಾರಿಯಲ್ಲಿಯೇ ಮಕ್ಕಳು ಸಹ ಮುನ್ನಡೆಯುತ್ತಿದ್ದಾರೆ. ಕವಿತಾ ನಟಿಯಾಗಿ, ನಿರ್ದೇಶಕಿಯಾಗಿ, ಗೌರಿ ಮತ್ತು ಇಂದ್ರಜಿತ್ ಲಂಕೇಶ್ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಲೆನಾಡಿನ ಹಲವು ಚೇತನಗಳಲಲಿ ಒಬ್ಬರಾಗಿ ಕಣ್ಮರೆಯಾಗಿರುವ ಪಿ.ಲಂಕೇಶ್ ರವರ ವಿಚಾರ ಧಾರೆಗಳು, ಚಿಂತನೆಗಳು, ಆದರ್ಶಗಳು ಇಂದಿಗೂ ಸಹ ಪ್ರಸ್ತುತವಾಗಿವೆ.

-ಅನಂತಕುಮಾರ್, ಭದ್ರಾವತಿ.

ಕಾಮೆಂಟ್‌ಗಳಿಲ್ಲ: